ಸಾಲೊಟಗಿ :-
ಭಾರತದ ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಒಂದು ಗ್ರಾಮ; ಇತಿಹಾಸ ಪ್ರಸಿದ್ಧ ಸ್ಥಳ. ಇಂಡಿಯಿಂದ ಆಗ್ನೇಯಕ್ಕೆ 8 ಕಿಮೀ ದೂರದಲ್ಲಿದೆ. ಜನಸಂಖ್ಯೆ 7,487.

	ಈ ಗ್ರಾಮದಲ್ಲಿ ಪ್ರಾಚೀನ ಶಿವಯೋಗೀಶ್ವರ ದೇವಾಲಯವಿದೆ. ಬಿದರೆಯ ದೊರೆಗಳು ಇದನ್ನು ಕಟ್ಟಿಸಿ ಅನೇಕ ದತ್ತಿಗಳನ್ನು ಬಿಟ್ಟರೆಂದು ಸ್ಥಳೀಯ ಹೇಳಿಕೆ. ಇಲ್ಲಿ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ.

	10-12ನೆಯ ಶತಮಾನಗಳ ಅವಧಿಯಲ್ಲಿ ಈ ಗ್ರಾಮ ಪಾವಿಟ್ಟಗೆ ಎಂಬ ಹೆಸರಿನ ಒಂದು ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಇಲ್ಲಿನ ವಿದ್ಯಾಶಾಲೆ ಅದರಿಂದೀಚೆಗೂ ಪ್ರವರ್ಧಮಾನಸ್ಥಿತಿಯಲ್ಲಿದ್ದು, ಗ್ರಾಮಶಾಲಾ ಪಾವಿಟ್ಟಗೆ ಎಂಬ ಹೆಸರು ತಳೆದಿರಬೇಕು; ಅದೇ ಕಾಲಕ್ರಮೇಣ ಸಾಲೊಟಗಿ ಎಂದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಮೂಲತಃ ಸಾಲೊಟಗಿಯಲ್ಲಿದ್ದ ಒಂದು ಸ್ತಂಭದ ಮೇಲೆ ಕೆತ್ತಿರುವ 3 ಶಾಸನಗಳಿಂದ ಇಲ್ಲಿನ ವಿದ್ಯಾಶಾಲೆಯ ವಿವರಗಳು ದೊರಕುತ್ತವೆ. 945ರಲ್ಲಿ ಬರೆಯಲಾದ ಸಂಸ್ಕøತ ಪದ್ಯರೂಪದಲ್ಲಿರುವ ಮೊದಲನೆಯ ಶಾಸನದಲ್ಲಿ ರಾಷ್ಟ್ರಕೂಟ 3ನೆಯ ಕೃಷ್ಣನ ಪ್ರಧಾನಮಂತ್ರಿಯೂ ಸಂಧಿವಿಗ್ರಹಿಯೂ ಸ್ವಯಂ ಪಂಡಿತನೂ ಆಗಿದ್ದ ನಾರಾಯಣನೆಂಬಾತ ಪಾವಿಟ್ಟಗೆ ಗ್ರಾಮದಲ್ಲಿ ಒಂದು ಶಾಲೆಯನ್ನು ಕಟ್ಟಿಸಿ, ಅಲ್ಲಿ ತ್ರಿಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಎಂದು ತಿಳಿಸುತ್ತದೆ. ಇದೇ ಶಾಸನದ ಪ್ರಕಾರ ಈ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಲವಾರು ದೇಶಗಳಿಂದ ಬಂದವರು (ಅತ್ರ ವಿದ್ಯಾರ್ಥಿನಃ ಸಂತಿ ನಾನಾ ಜನಪದೋದ್ಭವಾಃ).

	ಪಾವಿಟ್ಟಗೆಯ ಗ್ರಾಮಪತಿಯಾಗಿದ್ದ ಚಕ್ರಾಯುಧಭಟ್ಟ ಈ ವಿದ್ಯಾ ಶಾಲೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗಾಗಿ 271/2 ನಿವೇಶನಗಳನ್ನೂ ದೀಪಗಳ ಖರ್ಚಿಗಾಗಿ 12 ನಿವರ್ತನ ಭೂಮಿಯನ್ನೂ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆಗಾಗಿ 500 ನಿವರ್ತನ ಭೂಮಿಯನ್ನೂ ಅಲ್ಲಿನ ಅಧ್ಯಾಪಕರೊಬ್ಬರಿಗೆ 50 ನಿವರ್ತನ ಭೂಮಿ ಮತ್ತು ಒಂದು ವಾಸಸ್ಥಾನವನ್ನೂ ಮಾನ್ಯವಾಗಿ ಬಿಟ್ಟುಕೊಟ್ಟಿದ್ದ. ಅಲ್ಲದೆ ಗ್ರಾಮಸ್ಥರು ವಿವಾಹದ ಸಮಯಗಳಲ್ಲಿ 5 ನಾಣ್ಯಗಳನ್ನೂ (ಸು-ದ್ರವ್ಯಾಣಿ ಪಂಚ ಪುಷ್ಪಾಣಿ), ಉಪನಯನದ ಸಂದರ್ಭಗಳಲ್ಲಿ ಅದರ ಅರ್ಧದಷ್ಟನ್ನೂ ಮತ್ತು ಚೂಡಾಕರ್ಮದ ಸಮಯದಲ್ಲಿ ಅದರ ಅರ್ಧದಷ್ಟನ್ನೂ ಶಾಲಾ ವಿದ್ಯಾರ್ಥಿ ಸಂಘಕ್ಕೆ ಕೊಡುತ್ತಿದ್ದರು. ಅಲ್ಲದೆ, ಬ್ರಾಹ್ಮಣ ಭೋಜನ ವೇರ್ಪಟ್ಟಾಗಲೆಲ್ಲ ಶಾಲೆಯ ಉಪಾಧ್ಯಾಯರುಗಳನ್ನೂ ವಿದ್ಯಾರ್ಥಿಗಳನ್ನೂ ಯಥಾಶಕ್ತಿ ಆಹ್ವಾನಿಸಬೇಕೆಂಬ ನಿರ್ಧಾರವೂ ಆಗಿತ್ತು.

	ಸು.11ನೆಯ ಶತಮಾನದಲ್ಲಿ ರಚಿತವಾಗಿರಬಹುದಾದ ಒಂದು ಶಾಸನದ ಪ್ರಕಾರ ಸಾಲೊಟಗಿಯ ಶಾಲೆಯ ಕಟ್ಟಡ ಬಿದ್ದು ಹೋದಾಗ ಕುಂಚಿಗ ಎಂಬಾತ ಅದನ್ನು ಮತ್ತೆ ಕಟ್ಟಿಸಿದ. ಅಲ್ಲಿನ ಹಲವಾರು ಕಂಬಗಳನ್ನು ನಿಲ್ಲಿಸುವಾಗ, ಕುಂಚಿಗ ತಾನೇ ಒಂದೆರಡನ್ನು ಧರ್ಮವನ್ನೇ ಎತ್ತಿ ನಿಲ್ಲಿಸುತ್ತಿರುವಂತೆ, ನಿಲ್ಲಿಸಿದನಂತೆ; ಹಾಗೆ ನಿಲ್ಲಿಸಿದ ಸ್ತಂಭವೇ, ಅವನ ಕೀರ್ತಿಸ್ತಂಭವಾದಂತಾಯಿತು ಎಂದು ತಿಳಿದುಬರುತ್ತದೆ.

	ಸು.11-12ನೆಯ ಶತಮಾನದಲ್ಲಿ ರಚಿತವಾದ ಇನ್ನೊಂದು ಶಾಸನ ಕನ್ನಡ ಗದ್ಯದಲ್ಲಿದ್ದು, ಮಹಾಮಂಡಲೇಶ್ವರ ಗೋವಣರಸ ಈ ಶಾಲೆಗೆ ಬಿಟ್ಟುಕೊಟ್ಟ ಭೂಮಿ-ದತ್ತಿಯ ಬಗ್ಗೆ ಪ್ರಸ್ತಾಪಿಸುತ್ತದೆ.      

(ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ